ಮೆತೊಡಿಸ್ಟ್ ಸಭೆ - 
ಬೈಬಲ್ಲಿನಲ್ಲಿ ಹೇಳಿರುವ ಜೀವನ ಕ್ರಮವನ್ನು ಕ್ರೈಸ್ತರು ಅನುಸರಿಸುವಂತೆ ತಿಳಿಯ ಹೇಳಲು 18ನೆಯ ಶತಮಾನದ ಉತ್ತರಾರ್ಧದಲ್ಲಿ ಹುಟ್ಟಿದ ಸಭೆ. ಆ ಕಾಲದಲ್ಲಿ ಇಂಗ್ಲೆಂಡಿನ ಚರ್ಚ್ ಸಭೆಯಲ್ಲಿ ಯತಾರ್ಥವಾದ ದೈವಭಕ್ತಿ ಇಳಿಮುಖವಾಗುತ್ತಿರುವುದು ಕಾಣತೊಡಗಿತ್ತು. ಸಭಿಕರು ಹೆಸರಿಗೆ ಮಾತ್ರ ಸಭಾನಿಯಮಗಳನ್ನು ಪಾಲಿಸಿದರೂ ಆಂತರ್ಯದಲ್ಲಿ ಅವರು ಭಕ್ತಿಹೀನರಾಗಿದ್ದರು. ಈ ಸಮಯದಲ್ಲಿ ಆಕ್ಸ್‍ಫರ್ಡ್ ವಿದ್ಯಾಲಯಗಳಲ್ಲಿದ್ದ ವಿದ್ಯಾರ್ಥಿಗಳಲ್ಲಿ ಕೆಲವರು ಒಂದು ಸಮಾಜ ಏರ್ಪಡಿಸಿಕೊಂಡು ಆಸಕ್ತಿಯಿಂದ ಕ್ರೈಸ್ತಧರ್ಮಾನುಸಾರ ಜೀವಿಸಲು ಪ್ರಾರಂಭಿಸಿದರು. ಅವರು ಪ್ರತಿನಿತ್ಯ ವೇದಪಾರಾಯಣ, ಪ್ರಾರ್ಥನೆ, ಧ್ಯಾನ, ಆತ್ಮಪರೀಕ್ಷೆ ಮೊದಲಾದ ಭಕ್ತಿ ಸಾಧನ ಕಾರ್ಯಗಳಲ್ಲಿ ನಿರತರಾದರು. ಸೆರೆಯಲ್ಲಿದ್ದವರನ್ನೂ ರೋಗಿಗಳನ್ನೂ ಸಂದರ್ಶಿಸಿದರು. ತಮಗೆ ಅನುಕೂಲವಿಲ್ಲದೇ ಇದ್ದರೂ ಬಡವರಿಗೆ ಸಹಾಯ ಮಾಡಿದರು. ಮಕ್ಕಳಿಗೆ ವಿದ್ಯೆ ಕಲಿಸಿದರು. ಹೀಗೆ ನಿಜವಾದ ಕ್ರೈಸ್ತ ಬಾಳನ್ನು ಬಾಳಲು ಯತ್ನಿಸಿದರು. ಈ ಸಮಾಜದಲ್ಲಿದ್ದವರಲ್ಲಿ ಮೂವರು ಮೆತೊಡಿಸ್ಟ್ ಸಭೆಯ ಸ್ಥಾಪನೆಗೆ ಕಾರಣರಾದರು. ಜಾನ್‍ವೆಸ್ಲಿ, ಇವನ ತಮ್ಮ ಚಾಲ್ರ್ಸ್ ವೆಸ್ಲಿ ಮತ್ತು ಜಾರ್ಜ್ ವೈಟ್‍ಫೀಲ್ಡ್ ಇವರೇ ಆ ಮೂವರು.

	ಜಾನ್ ವೆಸ್ಲಿ ಗುರುಪಟ್ಟ ಹೊಂದಿ ಜಾರ್ಜಿಯ ದೇಶದಲ್ಲಿ ಕ್ರೈಸ್ತಸಭೆಯ ಸೇವೆಗೆ ನೇಮಕಗೊಂಡ. ಈತ ತಮ್ಮನೊಂದಿಗೆ ಆ ದೇಶಕ್ಕೆ ಹೋದ. ಅಲ್ಲಿ ಈತನ ಸೇವೆ ಸಫಲವಾಗಲಿಲ್ಲ. ತನ್ನ ಆತ್ಮವನ್ನೂ ಮನಸ್ಸನ್ನೂ ಪೂರ್ಣವಾಗಿ ಕ್ರಿಸ್ತನಿಗೆ ಒಪ್ಪಿಸಿಕೊಂಡಿರಲಿಲ್ಲವಾದ ಕಾರಣ ಪಾಪಕ್ಷಮೆಯ ಅನುಭವವೂ ಶರಣುತನದ ಬಲವೂ ಇವನಿಗಿರಲಿಲ್ಲ. ಎರಡು ವರ್ಷಗಳ ತರುವಾಯ ಇಂಗ್ಲೆಂಡಿಗೆ ಹಿಂತಿರುಗಿ ಬಂದ. ಮೊರೇವಿಯ ಕ್ರೈಸ್ತರ ಜೀವನವನ್ನೂ ಸೇವೆಯನ್ನೂ ಕಂಡು ಕ್ರಿಸ್ತನಿಗೆ ಶರಣಾಗತನಾಗುವುದನ್ನು ಕಲಿತ. 24 ಮೇ 1738 ರಂದು ಜಾನ್‍ವೆಸ್ಲಿಗೆ ನೂತನ ಆತ್ಮಾನುಭವವುಂಟಾಗಿ ಕ್ರಿಸ್ತನ ದಾಸನಾದ. ಅಲ್ಲಿಂದ ಮುಂದೆ ಐವತ್ತು ವರ್ಷಗಳ ಕಾಲ ಇಂಗ್ಲೆಂಡ್, ವೇಲ್ಸ್, ಐರ್ಲೆಂಡ್ ದೇಶಗಳಲ್ಲಿ ಸಂಚರಿಸಿ ಕ್ರಿಸ್ತನ ಸುವಾರ್ತೆಯನ್ನು ಸಾರಿ ಜನರನ್ನು ಯಥಾರ್ಥ ಕ್ರೈಸ್ತ ಜೀವನದಲ್ಲಿ ಸೇರಿಸಿದ. ಚಾಲ್ರ್ಸ್‍ವೆಸ್ಲಿ ತನ್ನ ಅಣ್ಣನ ಜೊತೆಯಲ್ಲಿದ್ದು ಸಂಗೀತ ರಚಿಸಿ, ಹಾಡಿ ಕ್ರೈಸ್ತ ಜೀವನ ಆನಂದದಿಂದ ತುಂಬಿದುದೆಂದು ತೋರಿಸಿಕೊಟ್ಟ.

	ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿಯ ಸಾಮಾನ್ಯ ಜನರು ವೆಸ್ಲಿಯ ಉಪದೇಶವನ್ನು ಕುತೂಹಲದಿಂದ ಅಂಗೀಕರಿಸಿ ಶಿಷ್ಯರಾದರು. ತನ್ನ ಪಕ್ಷದವರು ದೇಶದ ನಾನಾ ಕಡೆಗಳಲ್ಲಿ ಗುಂಪು ಗುಂಪಾಗಿರುವುದನ್ನು ಕಂಡು ವೆಸ್ಲಿ ಅವರನ್ನು ಕ್ಲಾಸ್ ಮೀಟಿಂಗ್, ಸರ್ಕಿಟ್, ಕಾನ್ಫರೆನ್ಸ್ ಮೊದಲಾದ ಸಂಸ್ಥೆಗಳಲ್ಲಿ ಸೇರಿಸಿ ಅವರಿಗೆ ಸಭಾ ವಿಧಾನಗಳನ್ನು ಏರ್ಪಡಿಸಿಕೊಟ್ಟ. ಕ್ಲಾಸ್ ಮೀಟಿಂಗ್ ಎಂದರೆ ಎಂಟು ಹತ್ತು ಮಂದಿ ಸಭಿಕರು ವಾರಕ್ಕೊಮ್ಮೆ ಜೊತೆಗೂಡಿ ಬಂದು ದೇವರನ್ನು ಧ್ಯಾನಿಸಿ ತಮ್ಮ ಜೀವನವನ್ನು ಪರೀಕ್ಷಿಸಿಕೊಂಡು ಪರಸ್ಪರ ಸಹಕಾರಿಗಳಾಗಿ ಜೀವಿಸಬೇಕೆಂಬುದು. ಈ ಕ್ರಮ ಆತ್ಮದ ಬೆಳವಣಿಗೆಗೆ ಕಾರಣವಾಗಿ ಮೆತೊಡಿಸ್ಟ್ ಸಭಿಕರಲ್ಲಿ ಆತ್ಮಪರಿಶುದ್ಧತೆ ತಮ್ಮ ಕಾರ್ಯಗಳನ್ನು ಒಂದು ಕ್ರಮ (ಮೆತೊಡ್) ಅನುಸರಿಸಿ ನಡೆಸುತ್ತಿದ್ದುದರಿಂದ ಅವರಿಗೆ ಮೆತೊಡಿಸ್ಟ್ ಸಭೆಯವರೆಂಬ ಹೆಸರಾಯಿತು. `ಬೈಬಲಿನಲ್ಲಿ ಹೇಳಿರುವ ಜೀವನ ಕ್ರಮ ಅನುಸರಿಸುವಾತ ನಿಜವಾದ ಮೆತೊಡಿಸ್ಟ್ ಸಭಿಕ ಎಂಬುದು ಜಾನ್ ವೇಸ್ಲಿಯ ಹೇಳಿಕೆ.

	ಈತನ ಜೊತೆಯಲ್ಲಿ ಉಪದೇಶ ಮಾಡುತ್ತಿದ್ದವರು ಸಾಧಾರಣ ಜನರಾಗಿದ್ದರು. ಹೆಚ್ಚಿನ ವಿದ್ಯೆ ಅವರಿಗಿರಲಿಲ್ಲ. ಅವರೂ ಸಭೆಗಳಲ್ಲಿ ಕ್ರೈಸ್ತ ಸಂಸ್ಕಾರಗಳನ್ನು ಆಚರಿಸುವುದಕ್ಕೆ ಯೋಗ್ಯರಾಗುವ ಹಾಗೆ ಅವರಿಗೆ ಬಿಷಪರಿಂದ ದೀಕ್ಷೆ ಕೊಡಿಸುವುದಕ್ಕೆ ವೆಸ್ಲಿ ಪ್ರಯತ್ನಿಸಿದ. ಆದರೆ ಬಿಷಪರು ಒಪ್ಪಲಿಲ್ಲ. ಆದ ಕಾರಣ ವೆಸ್ಲಿ ತಾನೇ ತನ್ನ ಉಪದೇಶಕರಿಗೆ ದೀಕ್ಷೆ ಕೊಟ್ಟು ತನ್ನ ಸಭೆಗಳಲ್ಲಿ ಗುರುಗಳಾಗಿ ನೇಮಿಸಿದ. ಈ ಕಾರಣದಿಂದ ವೆಸ್ಲಿಯ ಸಭೆಗಳು ಚರ್ಚ್ ಆಫ್ ಇಂಗ್ಲೆಂಡ್ ಸಭೆಯಿಂದ ಬೇರೆಯಾದವು. ವೆಸ್ಲಿ ಜೀವಿಸಿದ್ದ ತನಕವೂ ತನ್ನ ಸಭೆಗಳವರು ಚರ್ಚ್ ಆಫ್ ಇಂಗ್ಲೆಂಡಿಗೆ ಸೇರಿದವರೆಂದು ಹೇಳುತ್ತ ಬಂದ. ಆದರೆ ಈತನ ಕ್ರಿಯೆಗಳೂ ಕ್ರಮಗಳೂ ಬೇರೆಯಾಗಿದ್ದುದರಿಂದ ಈತ ಕಾಲವಾದ ಸ್ವಲ್ಪ ಸಮಯದಲ್ಲಿಯೇ ಮೆತೊಡಿಸ್ಟ್ ಸಭೆ ಪ್ರತ್ಯೇಕವಾದ ಒಂದು ಸಭೆಯಾಗಿ ನಿಂತಿತು.

	ಜಾನ್ ವೆಸ್ಲಿ ಇಂಗ್ಲೆಂಡಿನಲ್ಲಿ ಉಪದೇಶಿಸಿದಂತೆಯೇ ಜಾರ್ಜ್ ವೈಟ್ ಫೀಲ್ಡ್ ಎಂಬಾತ ಅಮೆರಿಕದಲ್ಲಿ ಉಪದೇಶಮಾಡಿ ಸಭೆಗಳನ್ನು ಸ್ಥಾಪಿಸಿದ. ಈತ ಮಾತುಗಾರನಾಗಿದ್ದು ಜನರನ್ನು ಆಕರ್ಷಿಸಿದ. ಆ ಸಭೆಗಳಲ್ಲಿ ಸೇವೆಮಾಡುವುದಕ್ಕಾಗಿ ಡಾಕ್ಟರ್ ಕೋಕ್ ಎಂಬಾತನಿಗೆ ವೆಸ್ಲಿ ದೀಕ್ಷೆ ಕೊಟ್ಟು ಕಳುಹಿಸಿದ. ಕೋಕ್ ಅಮೆರಿಕದಲ್ಲಿ ಸೇವೆ ಮಾಡುತ್ತಿದ್ದಾಗ `ನಾನು ಸೂಪರಿಂಟೆಂಡೆಂಟ್ ಇಲ್ಲವೆ ಬಿಷಪ ಎಂದು ಹೇಳಿಕೊಂಡ. ಅವನ ತರುವಾಯ ಸೂಪರಿಂಟೆಂಡೆಂಟ್ ಕೆಲಸಕ್ಕೆ ನೇಮಕವಾದವರು ಬಿಷಪರು ಎಂದು ಕರೆಯಲ್ಪಟ್ಟರು. ಹೀಗಾಗಿ ಅಮೆರಿಕದ ಮೆತೊಡಿಸ್ಟ್ ಸಭೆಯಲ್ಲಿ ಬಿಷಪರಿದ್ದಾರೆ. ಇವರು ಪಾರಂಪರ್ಯವಾಗಿ ಬಂದ ಬಿಷಪರಿಂದ ದೀಕ್ಷೆ ಹೊಂದಿದವರಲ್ಲ.											
(ಎಚ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ